ಗಡಂಗು

ಗಿರಣಿ, ಕಾರ್ಖಾನೆ ಹಾಗೂ ವ್ಯಾಪಾರಿಗಳು ಮಾರಾಟದ ಸರಕನ್ನು ಅಧಿಕ ಪರಿಮಾಣದಲ್ಲಿ ದಾಸ್ತಾನು ಮಾಡುವ ಆಲಯ ಅಥವಾ ಮಳಿಗೆ. ಗೊದಾಮು (ಗೋಡೌನ್, ವೇರ್ ಹೌಸ್). ಮಾರಾಟಕ್ಕಾಗಿ ಅಥವ ವಿತರಣೆಗಾಗಿ ಅಣಿಯಾಗಿರುವ ಸರಕನ್ನು ವ್ಯವಸ್ಥಿತವಾಗಿ ಶೇಖರಿಸಿಡುವ ಸ್ಥಳ, ಕೊಠಡಿ, ಕಟ್ಟಡ.

	ಆಯಾ ದಿನದ ಬೇಡಿಕೆಗನುಗುಣವಾಗಿ ಸರಕನ್ನು ಉತ್ಪಾದಿಸುವುದು ಇಲ್ಲವೆ ಕೊಳ್ಳವುದು ಆದರ್ಶ ವ್ಯವಸ್ಥೆ. ಆದರೆ ಇದು ವಾಸ್ತವವಾಗಿ ಸಾಧ್ಯವಿಲ್ಲ. ಉತ್ಪಾದನೆ ಸರಳ ಹಾಗೂ ಅವಿಚ್ಛಿನ್ನವಾಗಿರುವ ಕೈಗಾರಿಕೆಗಳಲ್ಲಿರುವಲ್ಲಿ ಈ ಆದರ್ಶಸ್ಥಿತಿಯನ್ನು ಮುಟ್ಟಲು ಪ್ರಯತ್ನಿಸಬಹುದು. ಉತ್ಪಾದಿತ ಸರಕುಗಳ ಬೇಡಿಕೆ ಹಾಗೂ ಬೆಲೆಗಳಲ್ಲಿ ಏರಿಳಿತವಿರುತ್ತದೆ. ಒಂದೆಡೆ ಉತ್ಪಾದನೆಯಾದ ಸರಕನ್ನು ಬೇಡಿಕೆಗನುಗುಣವಾಗಿ ದೂರ ದೂರಕ್ಕೆ ವಿತರಣೆ ಮಾಡಬೇಕಾಗುತ್ತದೆ. ಅನುಕೂಲಕರ ಧಾರಣೆವಾಸಿಯಿರುವಾಗ ಸರಕನ್ನು ಕೊಂಡು ಶೇಖರಿಸಿಟ್ಟುಕೊಳ್ಳುವುದು ಒಳ್ಳೆಯದು. ಗಡಂಗುಗುಳಲ್ಲಿ ಇಂಥ ಸರಕನ್ನು ಶೇಖರಿಸಲಾಗುತ್ತದೆ.

	ವಿಕ್ರಯದಾರರು ತಮ್ಮ ಬಿಕರಿ ಮಳಿಗೆಗಳಲ್ಲಿ ವಿವಿಧ ಬಗೆಯ ಸರಕನ್ನು ಓರಣವಾಗಿ ಇಡಬೇಕಾಗುತ್ತದೆ. ಅಲ್ಲಿ ಪ್ರತಿ ಬಗೆಯ ಸರಕನ್ನು ಸ್ವಲ್ಪ ಪರಿಮಾಣದಲ್ಲಿ ಮಾತ್ರ ಇಡಲು ಸಾಧ್ಯ. ಅಲ್ಲಿಯ ಸರಕು ತೀರಿದಂತೆಲ್ಲಾ ಅದನ್ನು ಗಡಂಗಿನಿಂದ ತಂದು ತುಂಬಿಕೊಳ್ಳುತ್ತಾರೆ.  ಅಧಿಕ ಗಾತ್ರದ ಬೇಡಿಕೆಯನ್ನು ಗಡಂಗಿನಿಂದಲೇ ನೇರವಾಗಿ ಪೊರೈಸುತ್ತಾರೆ. ಕೆಲವು ಠೋಕು ವ್ಯಾಪಾರಿಗಳು ತಮ್ಮ ಬಿಕರಿ ಮಳಿಗೆಯಲ್ಲಿ ಸರಕಿನ ಮೋಸ್ತ್ರಗಳನ್ನು (ಸ್ಯಾಂಪಲ್) ಮಾತ್ರ ಇಟ್ಟುಕೊಂಡಿದ್ದು ಖರೀದಿದಾರರ ಬೇಡಿಕೆಗಳನ್ನೆಲ್ಲ ಗಡಂಗಿನಿಂದಲೇ ನೇರವಾಗಿ ಪೂರೈಸುತ್ತಾರೆ.

	ಗಡಂಗು ಬಿಕರಿ ಮಳಿಗೆಗಳ ಹೊಂದಿಕೊಂಡೇ ಇರಬಹುದು. ಚಿಲ್ಲರೆ ವ್ಯಾಪಾರಿಗಳಿಗೆ ಇದು ತುಂಬ ಅನುಕೂಲ. ಕೆಲವು ವೇಳೆ ಬಿಕರಿ ಮಳಿಗೆ ಕೇಂದ್ರಸ್ಥಾನದಲ್ಲಿದ್ದು ಗಡಂಗುಗಳು ದೂರದಲ್ಲಿರುತ್ತವೆ. ಸ್ಥಳಾಭಾವ ಮತ್ತು ಮಿತವ್ಯಯೋದ್ಧೇಶ ಇದಕ್ಕೆ ಮುಖ್ಯ ಕಾರಣಗಳು,

	ಗಡಂಗು ಭದ್ರವಾದ ಕಟ್ಟಡವಾಗಿರಬೇಕು. ಬೆಂಕಿ, ಮಳೆ, ಗಾಳಿ, ಇಲಿ, ಹೆಗ್ಗಣ, ಕಳ್ಳಕಾಕರ ದಾಳಿ ಇವಕ್ಕೆ ತುತ್ತಾಗದಂತಿರಬೇಕು.

	ಗಡಂಗಿನಲ್ಲಿ ಸಂಗ್ರಹಿಸಿಲಾಗಿರುವ ಸರಕನ್ನು ಆಧಾರವಾಗಿಟ್ಟು ಬ್ಯಾಂಕಿನಿಂದ ಅಲ್ಪಾವಧಿ ಸಾಲ ಪಡೆಯುವುದು ಸಾಮಾನ್ಯ. ಇದರಿಂದ ವ್ಯವಹಾರಕ್ಕೆ ಅಗತ್ಯವಾದ ಚಲ ಬಂಡವಾಳ ಸುಲಭವಾಗಿ ದೊರೆಯುತ್ತದೆ. ಸಂಗ್ರಹಿಸಿರುವ ಸರಕಿನ ಮಾರುಕಟ್ಟೆ ಬೆಲೆಯನ್ನು ಬ್ಯಾಂಕು ಅಂದಾಜು ಮಾಡಿ. ಅದರ ಮೇಲೆ ನಿರ್ದಿಷ್ಟ ಸೇಕಡವಾರು ಮೊಬಲಗನ್ನು ಸಾಲಕೊಡುತ್ತದೆ. ಆಗ ಬ್ಯಾಂಕೇ ಗಡಂಗಿಗೆ ಬೀಗಹಾಕಿ ಬೀಗದ ಕೈಯನ್ನು ಇಟ್ಟುಕೊಳ್ಳುತ್ತದೆ. ಈ ಬಗೆಯ ಸಾಲಕ್ಕೆ ಕೀಲಿಕೈಸಾಲ ಅಥವಾ ಗೊದಾಮು ಸಾಲ ಎನ್ನುತ್ತಾರೆ. ಬ್ಯಾಂಕಿನ ಅನುಮತಿಯೊಡನೆ ಅಂಥ ಗಡಂಗಿನೊಳಕ್ಕೆ ಹೆಚ್ಚಿನ ಸರಕನ್ನು ಸೇರಿಸುವುದೂ ಇರುವ ಸರಕನ್ನು ಹೊರತೆಗೆದು ವಿಕ್ರಯಿಸುವುದೂ ಸಾಧ್ಯವಿದೆ. ಎರಡನೆಯ ಸಂದರ್ಭದಲ್ಲಿ ಕಡಿಮೆಯಾಗುವ ಸರಕಿನ ಪರಿಮಾಣಕ್ಕೆ ಅನುಸಾರವಾಗಿ ಸಾಲವನ್ನು ಮರುಪಾವತಿ ಮಾಡುವುದು ಅಗತ್ಯವಾಗುತ್ತದೆ.					      (ಡಿ.ಎನ್.ಎಸ್.ಎಂ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ